ಆಂತ್ವ್ಯಾನ್ ಲೋರಾನ್ ಲೆವಾಸ್ಯೇರವರು ೧೭೪೩ನೆಯ ಇಸವಿ ಆಗಸ್ಟ್ ೨೬ರಂದು ಪ್ಯಾರಿಸ್ಸಿನಲ್ಲಿ ಜನಿಸಿದರು. ಅವರು ವೈಜ್ಞಾನಿಕ ಸಂಶೋಧನೆಗಳನ್ನು ತಮ್ಮ ೨೧ನೆಯ ವಯಸ್ಸಿನಲ್ಲಿಯೇ ಅಂದರೆ ೧೭೬೪ರಲ್ಲಿಯೇ ಆರಂಭಿಸಿದರು. ಅವರ ಮೊದಲನೆಯ ಸಂಶೋಧನೆ ಜಿಪ್ಸಂ ಎಂಬ ಖನಿಜದ ವಿಶ್ಲೇಷಣೆ. ಇದರ ಮೇಲಿನ ಲೇಖನ ಫ್ರೆಂಚ್ ಅಕಾಡೆಮಿಗೆ ಅವರು ಕಳುಹಿಸಿದ ಮೊದಲ ಲೇಖನವೂ ಆಗಿತ್ತು. ಆ ಲೇಖನದಲ್ಲಿ ಆ ಜಿಪ್ಸಂ ಖನಿಜವು ವಿಟ್ರಿಯೋಲಿಕ್ ಆಮ್ಲ (ಸಲ್ಫ್ಯೂರಿಕ್ ಆಮ್ಲ) ಮತ್ತು ಕಾಲ್ಕೇರಿಯನ್ ಅರ್ತ್‌ಗಳ (ಕ್ಯಾಲ್ಷಿಯಂ ಆಕ್ಸೈಡ್) ಸಂಯೋಜನೆಯಿಂದ ಆಗಿದೆಯೆಂದು ವಿವರಿಸಿದ್ದರು. ಲೆವಾಸ್ಯೇಯವರು ನಡೆಸಿದ ಸಂಶೋಧನೆಗಳು ದಹನಕ್ರಿಯೆಯ ಬಗ್ಗೆ ಕೇಂದ್ರಿತವಾಗಿದ್ದವು. ಆಗ ಅವರು ಎರಡು ವಿಷಯಗಳನ್ನು ಕಂಡುಹಿಡಿದರು. ವಸ್ತುಗಳು ದಹಿಸಿದಾಗ ಗಾಳಿಯು ಅವುಗಳಲ್ಲಿ ಬಂಧಿತವಾಗುವುದು ಮತ್ತು ಎರಡನೆಯದಾಗಿ ದಹನದಿಂದ ಉತ್ಪತ್ತಿಯಾದ ವಸ್ತುವಿನ ತೂಕವು ದಹಿಸಿದ ವಸ್ತುವಿನ ತೂಕಕ್ಕಿಂತ ಹೆಚ್ಚಾಗಿರುವುದು. ಎರಡು ಬೇರೆ ಬೇರೆ ವಸ್ತುಗಳು ಸಂಯೋಜಿಸಿದಾಗ ಎಷ್ಟು ಉಷ್ಣವು ಸೂಸುವುದೋ, ಆ ಸಂಯುಕ್ತ ವಸ್ತುವು ವಿಭಜಿಸಲು ಅದೇ ಪ್ರಮಾಣದ ಉಷ್ಣವನ್ನು ನಾವು ಅದಕ್ಕೆ ಕೊಡಬೇಕಾಗುತ್ತದೆ ಎಂಬುದಾಗಿಯೂ ಲೆವಾಸ್ಯೇಯವರು ಕಂಡುಹಿಡಿದರು. ಅದಕ್ಕೆ ‘ಲೆವಾಸ್ಯೇ-ಲೆಪ್ಲಾಸ್’ರ ನಿಯಮವೆಂದು ಕರೆಯುತ್ತಾರೆ. ‘ಗಿನಿ ಇಲಿ’ಗಳ ಉಸಿರಾಟದ ಮೇಲೆ ಪ್ರಯೋಗಗಳನ್ನು ನಡೆಸಿ, ಅವು ಎಷ್ಟು ಪ್ರಮಾಣದ ಆಮ್ಲಜನಕವನ್ನು ತನ್ನೊಳಗೆ ಉಸಿರಾಟದ ಮೂಲಕ ತೆಗೆದುಕೊಳ್ಳುತ್ತದೆ ಮತ್ತು ಎಷ್ಟು ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಉಸಿರಾಟದ ಮೂಲಕ ಹೊರಸೂಸುತ್ತದೆ ಎಂಬುದನ್ನು ಲೆವಾಸ್ಯೇ ಕಂಡುಹಿಡಿದನು. ಪ್ರಾಣಿಗಳ ಶರೀರದ ಉಷ್ಣವನ್ನು ಜನನದಿಂದ ಸಾಯುವವರೆಗೂ ಒಂದೇ ಮಟ್ಟದಲ್ಲಿ ಇಟ್ಟಿರುವುದು. ಆ ದಹನಕ್ಕೆ ಬೇಕಾದ ದಹ್ಯವಸ್ತುಗಳನ್ನು ರಕ್ತವೂ, ದಹನಕ್ಕೆ ಬೇಕಾದ ಆಮ್ಲಜನಕವನ್ನು ಗಾಳಿಯೂ ಒದಗಿಸುವುದು ಎಂಬುದಾಗಿ ಲೆವಾಸ್ಯೇ ಕಂಡುಹಿಡಿದರು. ಇದೇ ಪ್ರಯೋಗವನ್ನು ಮನುಷ್ಯರ ಮೇಲೆ ನಡೆಸಲು ಯೋಚಿಸಿದ. ಅದೇ ಕಾಲದಲ್ಲಿಯೇ ಫ್ರಾನ್ಸಿನಲ್ಲಿ ನಾಗರಿಕ ಕ್ರಾಂತಿ ಉಂಟಾದುದರಿಂದ, ಲೆವಾಸ್ಯೇರವರು ಬಂಧನಕ್ಕೊಳಗಾಗಿ ಸೆರೆಮನೆ ಸೇರಿದರು. ಲೆವಾಸ್ಯೇಯವರು ೧೭೭೧ರಲ್ಲಿ ಮೇರಿಯವರನ್ನು ಮದುವೆಯಾದರು. ಮೇರಿಯವರು ಇಂಗ್ಲಿಷ್. ಲ್ಯಾಟಿನ್ ಭಾಷೆಗಳನ್ನು ಕಲಿತು, ಕ್ಯಾವೆಂಡಿಷ್, ಕಿರ್ವಾನ್ ಮುಂತಾದ ಆಗಿನ ಕಾಲದ ಪ್ರಮುಖ ವಿಜ್ಞಾನಿಗಳ ಲೇಖನಗಳನ್ನು ಲೆವಾಸ್ಯೇರವರಿಗಾಗಿ ಭಾಷಾಂತರಿಸುತ್ತಿದ್ದರು. ಲೆವಾಸ್ಯೇಯವರ ಪ್ರಕಟಣೆಯಲ್ಲಿರುತ್ತಿದ್ದ ಚಿತ್ರಗಳನ್ನೂ ಮೇರಿಯವರೇ ಚಿತ್ರಿಸುತ್ತಿದ್ದರು. ಕ್ರಾಂತಿಕಾರರು ಲೆವಾಸ್ಯೇಯವರನ್ನು ಕಾರಾಗೃಹದಲ್ಲಿಟ್ಟಾಗ ಅವರು ರಚಿಸಿದ ‘ಮೆಮಾಯರ‍್ಸ್ ದ ಕಿಮಿ’ ಗ್ರಂಥವನ್ನು ಅವರ ಮರಣಾನಂತರ ಮೇರಿಯವರು ಪರಿಷ್ಕರಿಸಿ, ಪ್ರಕಟಿಸಿದರು. ಇಂತಹ ಮಹಾನ್ ವಿಜ್ಞಾನಿಯ ಜೀವನ ದುರಂತದಲ್ಲಿ ಕೊನೆಗೊಂಡಿತು. ೧೭೯೪ರ ಮೇ ೮ರಂದು ಗಿಲೋಟಿನ್‌ನಿಂದ ಲೆವಾಸ್ಯೇಯವರ ಶಿರಚ್ಛೇದವಾಗಿ, ಅವರ ತಲೆ ಗಿಲೋಟಿನ್ ಬುಟ್ಟಿಯಲ್ಲಿ ಬಿದ್ದಿತು! == ಉಲೇಖಗಳು ==